ಕ್ಯಾನನ್, ವಾಲ್ಟರ್ ಬ್ರಾಡ್‍ಫರ್ಡ್  
1871-1945 ದೇಹವಿಜ್ಞಾನಶಾಸ್ತ್ರ, ಪಚನಕ್ರಿಯೆ ಮತ್ತು ಹಾರ್ಮೋನುಗಳ ಬಗ್ಗೆ ನಿಷ್ಣಾತನಾಗಿದ್ದನೆನ್ನಲಾಗಿದೆ. ಮನಶ್ಶಾಸ್ತ್ರದ ಕ್ಷೇತ್ರದಲ್ಲಿ ಜೇಮ್ಸ್-ಲಾಂಗ್ ಅವರ ಭಾವನಿಷ್ಪತ್ತಿ ಸಿದ್ಧಾಂತವನ್ನು ನಿರಾಕರಿಸಿ ವಿಖ್ಯಾತನಾದ. 1890, 1894ರಲ್ಲಿ ನಿರೂಪಣೆಗೊಂಡ ಜೇಮ್ಸ್-ಲಾಂಗ್ ಸಿದ್ಧಾಂತ ದೈಹಿಕ ವಿಪರ್ಯಾಸಗಳ ಪ್ರಾಮುಖ್ಯವನ್ನು ಒತ್ತಿಹೇಳಿತು. ಇದನ್ನು ಪ್ರಯೋಗದಿಂದ ಸಿದ್ಧಪಡಿಸಲು ಯತ್ನಿಸಿದ ಕೀರ್ತಿ ಕ್ಯಾನÀನದು. ಮೂವತ್ತು ವರ್ಷಗಳ ಅನಂತರ ಈತ ತನ್ನ ಪ್ರಯೋಗಗಳನ್ನು ನಾಯಿ, ಬೆಕ್ಕುಗಳ ಮೇಲೆ ನಡೆಸಿದ. ಈ ಪ್ರಯೋಗಗಳ ಫಲವಾಗಿ ಸಹಾನುಕಂಪ ನರಮಂಡಲದ ಉತ್ತೇಜನ ಮತ್ತು ರಕ್ತದಲ್ಲಿ ಅಡ್ರೆನಿನ್ ದ್ರವದ ಸ್ರಾವ, ಇವು ಭಾವೋತ್ಪಾದನೆಗೆ ಕಾರಣವೆಂದು ತಿಳಿದುಬಂತು. ಈತನ ಗ್ರಂಥಗಳಲ್ಲಿ ಬಾಡಿಲಿ ಚೇಂಜಸ್ ಇನ್ ಪೇನ್, ಹಂಗರ್, ಫಿಯರ್ ಅಂಡ್ ರೇಜ್(1915), ಫೀಲಿಂಗ್ಸ್ ಅಂಡ್ ಎಮೋಷನ್ಸ್ (1928) - ಇವು ಮುಖ್ಯವಾದುವು. (ಎಸ್.ಕೆ.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ